ವೇಗ, ಲೋಪೆ ದ
	1562-1635. ಸ್ಪ್ಯಾನಿಷ್ ಕವಿ ಮತ್ತು ನಾಟಕಕಾರ. ಶೈಶವಾವಸ್ಥೆಯಲ್ಲಿದ್ದ ಸ್ಪ್ಯಾನಿಷ್ ನಾಟಕ ಕಲೆಗೆ ರೂಪುಗೊಟ್ಟು ವಿಶೇಷವಾಗಿ ಬೆಳೆಸಿ ಸ್ಪ್ಯಾನಿಷ್ ನಾಟಕದ ಸ್ಥಾಪನಾಚಾರ್ಯ ಎನಿಸಿಕೊಂಡವ. ಮ್ಯಾಡ್ರಿಡ್‍ನಲ್ಲಿ 1562ರಲ್ಲಿ ಜನಿಸಿದ ಈತ ಸಾಹಸಮಯ ಜೀವನ ನಡೆಸಿದ. ಮಹಾ ರಸಿಕನೆಂಬ ಹೆಸರು ಗಳಿಸಿದ್ದ ಈತನ ಪ್ರಣಯ ಪ್ರಸಂಗಗಳು ನಿರಾಶೆಯಲ್ಲಿ ಕೊನೆಗೊಂಡವು. ಈತ 1614ರಲ್ಲಿ ಧರ್ಮಾಧಿಕಾ ರಿಯಾದ ಮೇಲೆ ಮಾರ್ತಾ ದ ನೆವರೆಸ್ ಎಂಬಾಕೆ ಯೊಡನೆ ನಡೆಸಿದ ಪ್ರಣಯ ಪ್ರಸಂಗ ಅತ್ಯಂತ ಪ್ರಸಿದ್ಧವಾ ದದ್ದು. ಇದು ಕೂಡ ನಿರಾಶೆಯಲ್ಲಿ ಮುಕ್ತಾಯ ವಾಯಿತು. 

	ಈತ 1800 ದೊಡ್ಡನಾಟ ಕಗಳನ್ನೂ 400 ಚಿಕ್ಕ ನಾಟಕ ಗಳನ್ನೂ ರಚಿಸಿರುವನೆಂದು ಪ್ರತೀತಿಯಿದ್ದರೂ ಸು. 500 ನಾಟಕಗಳನ್ನು ಬರೆದಿರುವನೆಂಬುದು ವಿದ್ವಾಂಸರ ಅಭಿಪ್ರಾಯ. ಇವನ ಕೃತಿಗಳಲ್ಲಿ ಪಾತ್ರರಚನೆಗಿಂತಲೂ ಘಟನೆಗಳಿಗೇ ಪ್ರಾಶಸ್ತ್ಯ ಹೆಚ್ಚಾಗಿದ್ದರೂ ಪಾತ್ರಗಳು ಮತ್ತು ಸಂದರ್ಭಗಳು ನೈಜ ಸ್ಪ್ಯಾನಿಷ್ ಜೀವನಕ್ಕೆ ಅನುಗುಣವಾಗಿವೆ. ಪ್ರಾಚೀನ ಗ್ರೀಕ್-ರೋಮನ್ ನಾಟಕಗಳಲ್ಲಿ ಈತನಿಗೆ ವಿಶೇಷ ಪ್ರೀತಿ ಇದ್ದರೂ ಈತ ಅರಿಸ್ಟಾಟಲನ ನಿಯಮಗಳನ್ನು  ಬದಿಗಿರಿಸಿ  ಸ್ವತಂತ್ರ ಮಾರ್ಗದಲ್ಲಿ ಕೃತಿಗಳನ್ನು ರಚಿಸಿದ. ಈತ ಕಳೆಕಟ್ಟಿಸಿದ ವಿದೂಷಕನ ಪಾತ್ರ ಸ್ಪ್ಯಾನಿಷ್ ನಾಟಕ ಪರಂಪರೆಯಲ್ಲಿ ನಿತ್ಯವಾಗಿ ಉಳಿಯಿತು. ಇವನ ಕೃತಿಗಳಲ್ಲಿ ದುರಂತ ನಾಟಕಗಳು ಅತ್ಯಲ್ಪ; ಹರ್ಷಾಂತ ನಾಟಕಗಳೇ ಹೆಚ್ಚು. ಕೃತಿಗಳ ಉದ್ದಕ್ಕೂ ವಿವಿಧ ಛಂದಸ್ಸು, ಸರಳ ಕಾವ್ಯ, ಸ್ಪ್ಯಾನಿಷ್ ಗ್ರಾಮಗಳ ಸ್ಥಳೀಯ ವಾತಾವರಣ ಮತ್ತು ಹಾಡುಗಳು ಬರುತ್ತವೆ. ಇವನ ಕೆಲವು ನಾಟಕಗಳಲ್ಲಿ ಸಮಾಜದ ಭಿನ್ನ ವರ್ಗಗಳ ಘರ್ಷಣೆ ಚಿತ್ರಿತವಾಗಿದೆ. ರೈತರು ತಮ್ಮ ಧಣಿಗಳನ್ನು ಧೈರ್ಯದಿಂದ ಎದುರಿಸಿ ಕೊನೆಗೆ ದೊರೆಯಿಂದ ತಮ್ಮ ಬೇಡಿಕೆಗಳನ್ನು ಪಡೆಯುವರು. ದೊರೆಯೇ ನಿಷ್ಪಕ್ಷಪಾತ ನ್ಯಾಯಮೂರ್ತಿ ಎಂಬ ನಾಟಕ ಈ ಬಗೆಯ ನಾಟಕಕ್ಕೆ ಉದಾಹರಣೆಯಾಗಿದೆ. ಕೆಲವು ನಾಟಕಗಳಲ್ಲಿ ಬಂಡಾಯದ ಅಂಶವಿದ್ದರೂ ಇಂಥ ಕೃತಿಗಳು ದೊರೆಯ ವೈಶಿಷ್ಟ್ಯವನ್ನು ಮಾತ್ರ ಎತ್ತಿ ತೋರಿಸುತ್ತವೆಯೇ ಹೊರತು ಕ್ರಾಂತಿಯನ್ನು ಪ್ರತಿಪಾದಿಸುವುದಿಲ್ಲ. ಈತ ಕೆಲವು ಭವ್ಯ ಕಾವ್ಯಗಳನ್ನೂ ಪಾಸ್ಟರಲ್ ಮಾದರಿಯ ಕಾವ್ಯಗಳನ್ನೂ ಭಕ್ತಿ ಕವನ ಮತ್ತು ಪ್ರೇಮ ಅಷ್ಟ ಷಟ್ಪದಿಗಳನ್ನೂ ಬರೆದಿದ್ದಾನೆ. ಲಾ ಡೋರಾಟೇಯ ಎಂಬುದು ಲಾ ಸೆಲ್‍ಸ್ಟೀನಾ ಮಾದರಿ ಯಲ್ಲಿ ಬರೆದ ಒಂದು ಸಂಭಾಷಣಾತ್ಮಕ ಗದ್ಯ ಕಾದಂಬರಿಯಾಗಿದೆ. ಇವನ ಪ್ರಸಿದ್ಧ ಕೃತಿಗಳ ಪೈಕಿ ಮ್ಯಾಡ್ರಿಡ್ ಉಕ್ಕು, ಪ್ರೇಮದಲ್ಲಿ ಕೊರಗುವ ಸ್ತ್ರೀ, ತೋಟಗಾರನ ನಾಯಿ, ಪ್ರತೀಕಾರವಿಲ್ಲದ ಶಿಕ್ಷೆ-ಇವನ್ನು ಹೆಸರಿಸಬಹುದು. ದಿ ನ್ಯೂ ಆರ್ಟ್ ಆಫ್ ರೈಟಿಂಗ್ ಪ್ಲೇಸ್ (1609) ಎಂಬ ಕೃತಿ ಈತನ ನಾಟಕ ಸಿದ್ಧಾಂತವನ್ನು ಪ್ರತಿಪಾದಿಸುತ್ತದೆ. ಈತ 1635ರಲ್ಲಿ ನಿಧನನಾದ.				
		(ಎಮ್.ಕೆ.ಕೆ.)

   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ